ಹೊಸಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳು ಅನಿರೀಕ್ಷಿತ ಭೇಟಿ: ಪರಿಶೀಲನೆ

Loading

ಹೊಸಪೇಟೆ : ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೊಸಪೇಟೆ ನಗರದಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಆಗಸ್ಟ್ 23ರಂದು ಅನಿರೀಕ್ಷಿತವಾಗಿ ಭೇಟಿ ನೀಡಿದರು.


ಆಸ್ಪತ್ರೆಯ ಕುಂದುಕೊರತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
ಜಿಲ್ಲಾಧಿಕಾರಿಗಳು, ಆಸ್ಪತ್ರೆಗೆ ಭೇಟಿ ನೀಡಿದಾಗ, ಆಸ್ಪತ್ರೆಯ ಕೌಂಟರ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದು ಕಂಡುಂದಿತು.


ಆಸನ ಸೇರಿದಂತೆ ಇನ್ನೀತರ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಜನರಿಗೆ ಅನುಕೂಲವಾಗಲು ಕೂಡಲೇ ಹೆಚ್ಚುವರಿ ಕೌಂಟರ್ ವ್ಯವಸ್ಥೆ ಮಾಡಲು ಹಾಗೂ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಕೂಡಲು ಆಸ್ಪತ್ರೆಯ ಹೊರಾಂಗಣ ಮತ್ತು ಒಳಾಂಗಣದಲ್ಲಿ ಸೂಕ್ತವಾದ ಆಸನದ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಗಳು ಇದೆ ವೇಳೆ ಆಸ್ಪತ್ರೆಯ ನಾನಾ ವಾರ್ಡಗಳಿಗೆ ಭೇಟಿ ನೀಡಿದರು.


ಕೆಲವು ವಾರ್ಡಗಳಲ್ಲಿ ಕಂಡುಬಂದ ಸಣ್ಣಪುಟ್ಟ ದುರಸ್ಥಿಗಳನ್ನು ತಿಂಗಳೊಳಗೆ ಸರಿಪಡಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಔಷಧಿಗಳ ಲಭ್ಯತೆ ಮತ್ತು ವೈದ್ಯಕೀಯ ಸಲಕರಣೆಗಳ ಬಗ್ಗೆ ಜಿಲ್ಲಾಧಿಕಾರಿಗಳು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.


ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮತ್ತು ಔಷಧಿ ನೀಡಬೇಕು. ಅನವಶ್ಯಕವಾಗಿ ಹೊರಗಡೆ ಚಿಕಿತ್ಸೆಗೆ ಮತ್ತು ಔಷಧಿ ಪಡೆದುಕೊಳ್ಳಲು ಹೇಳಬಾರದು. ಯಾರಾದರು ವೈದ್ಯಾಧಿಕಾರಿಗಳು, ರೋಗಿಗಳಿಗೆ ಹೊರಗಡೆ ಔಷಧಿ ಖರೀದಿಸಲು ತಿಳಿಸದರೆ, ಚೀಟಿ ಬರೆದು ನೀಡಿದರೆ ಅಂತವರ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.


ಆಸ್ಪತ್ರೆಗೆ ಅವಶ್ಯವಿರುವ ಎಲ್ಲಾ ಔಷಧಗಳನ್ನು ಹಾಗೂ ಉಪಕರಣಗಳನ್ನು 15 ದಿನಗಳೊಳಗಾಗಿ ನಿಯಮಾನುಸಾರ ಖರೀದಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಂತೆ ಸ್ಥಳದಲ್ಲಿ ಹಾಜರಿದ್ದ ಡಿಎಚ್ ಓ ಶಂಕರ ನಾಯಕ ಅವರಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಶೀಘ್ರದಲ್ಲಿ ಹೊರರೋಗಿ ವಿಭಾಗ (ಒಪಿಡಿ) ಯನ್ನು ಆಸ್ಪತ್ರೆ ಕಟ್ಟಡದ ಹೊರಾಂಗಣಕ್ಕೆ ಸ್ಥಳಾಂತರಿಸಿ ಒಳಗಿನ ಜನಸಂದಣಿ ಕಡಿಮೆ ಮಾಡಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.


ಆಸ್ಪತ್ರೆಯಲ್ಲಿ ಲಭ್ಯವಿರುವ ಬೆಡ್ ಸೇರಿದಂತೆ ಇನ್ನೀತರ ಮಾಹಿತಿಯನ್ನು ಪಡೆದ ಜಿಲ್ಲಾಧಿಕಾರಿಗಳು, 10 ಬೆಡ್ ಗಳನ್ನೊಳಗೊಂಡ ಐ.ಸಿ.ಯು. ಘಟಕವನ್ನು ಸ್ಥಾಪಿಸಲು ತಿಳಿಸಿದರು.


ಇದೆ ವೇಳೆ ಜಿಲ್ಲಾಧಿಕಾರಿಗಳು, ಆಸ್ಪತ್ರೆಯಲ್ಲಿನ ರೋಗಿಗಳೊಂದಿಗೆ ಅಲ್ಲಿನ ಸೌಲಭ್ಯಗಳ ಬಗ್ಗೆ ಚರ್ಚಿಸಿದರು.
ಸಾರ್ವಜನಿಕರು ಶಾಂತರೀತಿಯಿಂದ‌ ಇದ್ದು, ಆಸ್ಪತ್ರೆಯಲ್ಲಿ ಶುಚಿತ್ವ ಕಾಯ್ದುಕೊಂಡು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *