ಬಳ್ಳಾರಿ ಲೋಕಸಭೆ ಚುನಾವಣೆ-2024:ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ್ ಗೆಲುವು

Loading

ಹೊಸಪೇಟೆ (ವಿಜಯನಗರ ಜಿಲ್ಲೆ) : ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ವಿವಿಧ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ‌ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ ಬಳ್ಳಾರಿ-09 ಲೋಕಸಭೆ ಸಾರ್ವತ್ರಿಕ ಚುನಾವಣೆ-2024ರ ಮತ‌ ಎಣಿಕೆಯು ಜೂನ್ 4ರಂದು ನಡೆದಿದ್ದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ ತುಕಾರಾಮ್ ಅವರು 7,30,845 ಮತಗಳನ್ನು ಪಡೆದು 98,992 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಮತ ಎಣಿಕೆ ಪ್ರಾರಂಭವಾದ ಮೊದಲ ಸುತ್ತಿನಿಂದಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ ತುಕಾರಾಂ ಅವರು ಸಮೀಪದ ಸ್ಪರ್ಧಿ ಬಿಜೆಪಿ ಪಕ್ಷದ ಬಿ. ಶ್ರೀರಾಮುಲು ಅವರಿಗಿಂತಲೂ ಮತ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.
ಕಾಂಗ್ರೇಸನ ತುಕಾರಾಮ್ ಅವರ ಸಮೀಪದ ಪ್ರತಿಸ್ಪರ್ಧಿಯಾದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು 6,31,853 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.

ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿ ವಾಲ್ಮೀಕಿ ಕೃಷ್ಣಪ್ಪ ಅವರು 5,911, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಸಿ.ಚನ್ನವೀರ ಅವರು 3,797, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷದ ಅಭ್ಯರ್ಥಿ ಎ.ದೇವದಾಸ್ 1,741, ಪ್ರಹರ್ ಜನಶಕ್ತಿ ಪಾರ್ಟಿಯ ಅಭ್ಯರ್ಥಿ ಮಂಜುನಾಥ ಗೋಸಲ ಅವರು 1,322, ನವಭಾರತ ಸೇನಾ ಪಕ್ಷದ ಅಭ್ಯರ್ಥಿ ಜಿ.ಸ್ವಾಮಿ ಅವರು 944, ಪಕ್ಷೇತರ ಅಭ್ಯರ್ಥಿಗಳಾದ ಅರುಣ್ ಎಸ್.ಹಿರೇಹಾಳ್ ಅವರು 1,282, ಕಂಡಕ್ಟರ್ ಪಂಪಾಪತಿ ಅವರು 2,460 ಮತ್ತು ವೀರೇಶ ಅವರು 1,870 ಮತಗಳನ್ನು ಪಡೆದರು. ನೋಟಾಗೆ 7,889 ಮತಗಳು ಚಲಾವಣೆಯಾಗಿವೆ.

ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಒಟ್ಟು 3436 ಮತಗಳು ಚಲಾಯಿಸಲಾಗಿದ್ದು, ಈ ಪೈಕಿ 81 ಮತಗಳು ತಿರಸ್ಕೃತ ಗೊಂಡಿವೆ.  ಕಾಂಗ್ರೆಸ್‍ನ ಈ. ತುಕಾರಾಮ್ ಗೆ 1264 ಅಂಚೆ ಮತಗಳು ಬಂದಿವೆ. ಉಳಿದಂತೆ ವಾಲ್ಮೀಕಿ ಕೃಷ್ಣಪ್ಪ-10, ಬಿ. ಶ್ರೀರಾಮುಲು-2040, ಸಿ. ಚನ್ನವೀರ-03, ಎ. ದೇವದಾಸ್-02, ಮಂಜುನಾಥ ಗೋಸಾಲ-03, ಜಿ. ಸ್ವಾಮಿ-04, ಅರುಣ್ ಎಸ್ ಹಿರೇಹಾಳ್-01, ಕಂಡಕ್ಟರ್ ಪಂಪಾಪತಿ-02 ಹಾಗೂ ವೀರೇಶ್ ಗೆ 08 ಮತಗಳು ಬಂದಿವೆ.  ಅಂಚೆ ಮತದಲ್ಲಿ 18 ಮತಗಳು ನೋಟಾ ಗೆ ಚಲಾವಣೆಗೊಂಡಿವೆ.

ಕ್ಷೇತ್ರವಾರು ಮತದಾನ ವಿವರ: 88-ಹಡಗಲಿ ಕ್ಷೇತ್ರದಲ್ಲಿ ಕಾಂಗ್ರೆಸಗೆ 76,486 ಮತ್ತು ಬಿಜೆಪಿಗೆ 68,229 ಮತಗಳು, 89-ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ 97,103 ಬಿಜೆಪಿಗೆ 84,903 ಮತಗಳು, 90-ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ 89,955 ಮತ್ತು ಬಿಜೆಪಿಗೆ 90,120 ಮತಗಳು ಹಾಗೂ 96-ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್ -82,992 ಮತ್ತು ಬಿಜೆಪಿಗೆ 74,447
ಮತಗಳು ಲಭಿಸಿವೆ. ಬಳ್ಳಾರಿ ಜಿಲ್ಲಾ ವ್ಯಾಪ್ತಿಯ 91-ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸಗೆ 91,047 ಮತ್ತು ಬಿಜೆಪಿಗೆ 81,468., 93-ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸಗೆ-1,01,434 ಮತ್ತು ಬಿಜೆಪಿಗೆ-75,556 ಮತಗಳು, 94-ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ 94,628 ಮತ್ತು ಬಿಜೆಪಿಗೆ 80,247 ಮತಗಳು, 95-ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸಗೆ -95,936 ಮತ್ತು ಬಿಜೆಪಿಗೆ 74,843 ಮತಗಳು ಲಭಿಸಿವೆ.

ಬಳ್ಳಾರಿಯಲ್ಲಿ ಮತ ಎಣಿಕೆ:
ಬಳ್ಳಾರಿ ನಗರದ ರಾವ್‍ಬಹದ್ದೂರ್ ವೈ ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ‌‌ ಎಣಿಕೆ ನಡೆಯಿತು. ಮತ ಎಣಿಕಾ ಕೇಂದ್ರಕ್ಕೆ ಸಿ.ಸಿ ಕ್ಯಾಮರಾ ಅಳವಡಿಸಿ ಮತ್ತು ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಭದ್ರತೆ ನೀಡಲಾಗಿತ್ತು.
ಜೂನ್ 04ರ ಬೆಳಗ್ಗೆ 7.30ಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕರಾದ ಚಂದ್ರಶೇಖರ ಸಖಮುರಿ, ಜಿಲ್ಲಾ ಚುನಾವಣಾಧಿಕಾರಿಗಳು  ಸೇರಿದಂತೆ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಯ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂನ್ನು ತೆರೆಯಲಾಯಿತು. ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಬಳಿಕ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳ
ವಿದ್ಯುನ್ಮಾನ ಮತಯಂತ್ರಗಳ
ಮತ ಎಣಿಕೆ ನಡೆಯಿತು.

ಮತ ಎಣಿಕೆ ಕಾರ್ಯ ಒಟ್ಟು 08 ಹಾಲ್‍ಗಳಲ್ಲಿ ನಡೆಯಿತು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್ ಕಾಯ್ದಿರಿಸಲಾಗಿತ್ತು. ಪ್ರತಿ ಟೇಬಲ್‍ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯೋಜಿಸಲಾಗಿತ್ತು. ಬಳ್ಳಾರಿ ಜಿಲ್ಲೆಗೆ ಒಟ್ಟು 112 ಟೇಬಲ್‍ಗಳಂತೆ, 150 ಎಣಿಕಾ ಮೇಲ್ವಿಚಾರಕರು, 159 ಎಣಿಕಾ ಸಹಾಯಕರು ಮತ್ತು 146 ಎಣಿಕಾ ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಿಸಿದ್ದು, ಆಯಾಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮತ ಎಣಿಕೆ ಸಿಬ್ಬಂದಿ ಮತ್ತು ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳು ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಮಾಧ್ಯಮ ಕೇಂದ್ರದ ಮೂಲಕ ಮತ ಎಣಿಕೆಯ ಪ್ರತಿ ಸುತ್ತಿನ ಮಾಹಿತಿಯನ್ನು ಜನತೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿತ್ತು. ವಿಜಯನಗರ ಜಿಲ್ಲೆಯ ವಿವಿಧ ಕ್ಷೇತ್ರಗಳು ಒಳಗೊಂಡಂತೆ ಬಳ್ಳಾರಿ
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಂಡರೂ ಅಂತಿಮವಾಗಿ ಸಂಜೆಯ ವೇಳೆಗೆ ಫಲಿತಾಂಶವನ್ನು ಪ್ರಕಟಿಸಲಾಯಿತು.

Leave a Reply

Your email address will not be published. Required fields are marked *