ಕನಕಗಿರಿ ತಾಲೂಕು ಸಾಧನೆ ನಾಲ್ಕು ತಿಂಗಳಲ್ಲಿ 7 ಲಕ್ಷಕ್ಕೂ ಅಧಿಕ ಮಾನವ ದಿನಗಳ ಸೃಜನೆ

Loading

ಕನಕಗಿರಿ: ತಾಲ್ಲೂಕು ಪಂಚಾಯತಿ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಯಡಿ ನಾಲ್ಕು ತಿಂಗಳಲ್ಲಿಯೇ ಪ್ರಸಕ್ತ ಸಾಲಿನ ಗುರಿಯಲ್ಲಿ ಅರ್ಧಕ್ಕೂ ಹೆಚ್ಚು ಮಾನವ ದಿನಗಳ ಸೃಜಿಸಿ ದಾಖಲೆ ಮಾಡಿದೆ.

2023-24ನೇ ಆರ್ಥಿಕ ವರ್ಷದಲ್ಲಿ 8 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ನಾಲ್ಕೇ ತಿಂಗಳಲ್ಲಿ 7 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ನಿರೀಕ್ಷೆ ಮೀರಿದ ಈ ಸಾಧನೆಯಲ್ಲಿ ಅರ್ಧದಷ್ಟು ಮಹಿಳಾ ಕೂಲಿಕಾರರದೂ ಪ್ರಮುಖ ಪಾತ್ರವಿದೆ ಎಂದು ತಾ.ಪಂ ಇಓ ಚಂದ್ರಶೇಖರ್‌ ಕಂದಕೂರ್‌ ಹೇಳಿದರು.

ಈವರೆಗೆ 7,00,387 ಮಾನವ ದಿನ ಸೇರಿದಂತೆ ಒಟ್ಟಾರೆ ಶೇ 85 ಕ್ಕಿಂತಲೂ ಹೆಚ್ಚು ಮಾನವ ದಿನಗಳ ಸೃಜಿಸಿರುವುದು ವಿಶೇಷವಾಗಿದೆ. ಆದರೆ ಕಳೆದ 2022-23ನೇ ಸಾಲಿನಲ್ಲಿ 8 ಲಕ್ಷ ಮಾನವ ದಿನಗಳ ಗುರಿಯಲ್ಲಿ 6,14,761 ಮಾನವ ದಿನ ಗುರಿಸಾಧನೆ ಮಾಡಲಾಗಿತ್ತು. ಗ್ರಾಮ ಪಂಚಾಯತಿಗಳ ವಾಪ್ತಿಯಲ್ಲಿ ಜನರಿಗೆ ಮನರೇಗಾ ಯೋಜನೆಯ ಕುರಿತು ನಿರಂತರವಾಗಿ ಮನೆ ಮನೆ ಭೇಟಿ ನೀಡಿ ನರೇಗಾ ಯೋಜನೆ ಬಗ್ಗೆ ತಿಳಿಸಲಾಯಿತು.

ಸ್ವಸಹಾಯ ಸಂಘ. ಎಲ್‌ಸಿಅರ್‌ಪಿ, ಎಂಬಿಕೆ, ಕೃಷಿ ಸಖಿ ಹಾಗೂ ಪಶು ಸಖಿ ಅವರಲ್ಲಿ ಜಾಗೃತಿ ಮೂಡಿಸಲಾಯಿತು. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಿಗೆ ಐ.ಇ.ಸಿ ಸಂಯೋಜಕರು, ಬಿಎಫ್‌ಟಿ, ಗ್ರಾಮ ಕಾಯಕಮಿತ್ರ ಹಾಗೂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ನರೇಗಾ ಯೋಜನೆ ಕುರಿತು ಮಾಹಿತಿ ನೀಡಿದರು. ಇದರ ಸೌಲಭ್ಯ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಿದ ಫಲವಾಗಿ ಇದೆಲ್ಲ ಸಾಧ್ಯವಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದರು.

Leave a Reply

Your email address will not be published. Required fields are marked *